ನಿಮ್ಮ ಮನೆಯಲ್ಲಿ ಯಾರಾದರೂ ಗರ್ಭಿಣಿಯರು ಇದ್ದಾರೆಯೇ? ಆಸ್ಪತ್ರೆ ಖರ್ಚು, ತಾಯಿ ಮತ್ತು ಮಗುವಿನ ಪೌಷ್ಟಿಕ ಆಹಾರದ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ? ಹಾಗಾದರೆ ಈ ಮಹತ್ವದ ಮಾಹಿತಿ ನಿಮಗಾಗಿಯೇ.

ಗರ್ಭಿಣಿ ಮತ್ತು ಬಾಣಂತಿಯರ ಆರೈಕೆಗೆ ಹಣದ ತೊಂದರೆಯಾಗದಿರಲಿ ಎಂದು ಕೇಂದ್ರ ಸರ್ಕಾರವೇ ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಭರ್ಜರಿ ಹಣ ಜಮೆ ಮಾಡುತ್ತಿದೆ. ಆದರೆ, ಸರಿಯಾದ ಮಾಹಿತಿ ಇಲ್ಲದ ಕಾರಣ ನಮ್ಮೂರಿನ ಬಹಳಷ್ಟು ಜನ ಈ ಹಣವನ್ನು ಪಡೆಯುತ್ತಲೇ ಇಲ್ಲ, ನೀವೂ ಆ ತಪ್ಪು ಮಾಡಬೇಡಿ.
ಯಾವ ಯೋಜನೆ ಇದು?
ಇದುವೇ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ’ (PMMVY). ಗರ್ಭಿಣಿ ಮಹಿಳೆಯರು ಹಾಗೂ ಹಾಲುಣಿಸುವ ತಾಯಂದಿರ ಆರೋಗ್ಯ ಮತ್ತು ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಸರ್ಕಾರ ಈ ಆರ್ಥಿಕ ನೆರವು ನೀಡುತ್ತಿದೆ.
ಎಚ್ಚರಿಕೆ! ಹಣ ಪಡೆಯಲು ಇದು ಕಡ್ಡಾಯ
ಯೋಜನೆಯ ವಿವರ ತಿಳಿಯುವ ಮುನ್ನ ಈ ಪ್ರಮುಖ ವಿಷಯ ಗಮನಿಸಿ. ಅರ್ಜಿದಾರರ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು (Aadhaar Seeding / NPCI Mapping). ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲದಿದ್ದರೆ ಸರ್ಕಾರದಿಂದ ಹಣ ಬಿಡುಗಡೆಯಾದರೂ, ನಿಮ್ಮ ಅಕೌಂಟ್ಗೆ ಬಂದು ಬೀಳುವುದಿಲ್ಲ, ತಕ್ಷಣ ಬ್ಯಾಂಕ್ಗೆ ಹೋಗಿ ಇದನ್ನು ಖಚಿತಪಡಿಸಿಕೊಳ್ಳಿ.
ಹಣ ಹೇಗೆ ಮತ್ತು ಯಾವಾಗ ಸಿಗುತ್ತದೆ?
ಈ ಯೋಜನೆಯಡಿ ಅರ್ಹ ಮಹಿಳೆಯರಿಗೆ ಎರಡು ಹಂತಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಹಾಕಲಾಗುತ್ತದೆ.
1. ಮೊದಲ ಮಗುವಿಗೆ: ಒಟ್ಟು ₹5,000
- 1ನೇ ಕಂತು ₹1,000: ಗರ್ಭಧಾರಣೆ ನೋಂದಣಿ ಮಾಡಿಸಿದ ತಕ್ಷಣ.
- 2ನೇ ಕಂತು ₹2,000: ಗರ್ಭಧಾರಣೆಯ 6ನೇ ತಿಂಗಳ ನಂತರ (ಕನಿಷ್ಠ ಒಂದು ಪ್ರಸವಪೂರ್ವ ತಪಾಸಣೆ ಆಗಿರಬೇಕು).
- 3ನೇ ಕಂತು ₹2,000: ಮಗು ಜನಿಸಿ, ಜನನ ನೋಂದಣಿ ಮತ್ತು ಮೊದಲ ಹಂತದ ಲಸಿಕೆ ಮುಗಿದ ಮೇಲೆ.
2. ಎರಡನೇ ಮಗು (ಹೆಣ್ಣು ಮಗುವಾಗಿದ್ದರೆ): ಒಟ್ಟು ₹6,000
- ಎರಡನೇ ಮಗು ಹೆಣ್ಣಾಗಿದ್ದರೆ, ಪ್ರಸವದ ನಂತರ ಒಂದೇ ಕಂತಿನಲ್ಲಿ ₹6,000 ಸಿಗುತ್ತದೆ. (ಇದಕ್ಕಾಗಿ ಮಗು ಜನಿಸಿ, ಆರೋಗ್ಯ ತಪಾಸಣೆ ಪೂರ್ಣಗೊಂಡಿರಬೇಕು).
ಈ ರೀತಿ ಮೊದಲ ಮತ್ತು ಎರಡನೇ ಮಗುವಿಗೆ ಸೇರಿ ಒಟ್ಟು ₹11,000 ವರೆಗೆ ನೆರವು ಪಡೆಯಬಹುದು.
ಅರ್ಜಿ ಸಲ್ಲಿಸಲು ಬೇಕಾದ ಮುಖ್ಯ ದಾಖಲೆಗಳು:
- ತಾಯಿಯ ಆಧಾರ್ ಕಾರ್ಡ್.
- ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ಪಾಸ್ ಬುಕ್.
- ‘ತಾಯಿ-ಮಗು ರಕ್ಷಣಾ ಕಾರ್ಡ್’ (MCP Card).
ಅರ್ಜಿ ಸಲ್ಲಿಕೆ ಎಲ್ಲಿ?
ನೀವು PMMVY ವೆಬ್ಸೈಟ್ ಮೂಲಕ ಆನ್ಲೈನ್ನಲ್ಲೂ ಅರ್ಜಿ ಸಲ್ಲಿಸಬಹುದು. ಆದರೆ, ಆನ್ಲೈನ್ನಲ್ಲಿ ನೀವೇ ಅರ್ಜಿ ಸಲ್ಲಿಸುವ ಗೋಜಿಗೆ ಹೋಗುವ ಬದಲು, ನೇರವಾಗಿ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸುವುದು ಅತ್ಯುತ್ತಮ.
ಅವರು ಆಸ್ಪತ್ರೆಯಲ್ಲಿ ‘ತಾಯಿ-ಮಗು ರಕ್ಷಣಾ ಕಾರ್ಡ್ (MCP Card)’ ಮಾಡಿಸುವುದರ ಜೊತೆಗೆ, ನಿಮ್ಮ ಅರ್ಜಿಯನ್ನು ಯಾವುದೇ ತಪ್ಪಿಲ್ಲದೆ ಸಿಸ್ಟಮ್ನಲ್ಲಿ ಅಪ್ಲೋಡ್ ಮಾಡಲು ಸಹಾಯ ಮಾಡುತ್ತಾರೆ. ವಿಳಂಬ ಮಾಡಬೇಡಿ, ತಕ್ಷಣ ಮಾಹಿತಿ ಪಡೆದು ಈ ಯೋಜನೆಯ ಲಾಭ ಪಡೆಯಿರಿ.